ಕಾವ್ಯ

ಕಾವ್ಯ ಉಗಮಗೊಂಡದ್ದು ಪ್ರಾಚೀನ ಕಾಲದ ಧಾರ್ಮಿಕ ವಿಧಿಗಳಲ್ಲಿ, ಮಂತ್ರಗಳಲ್ಲಿ ಹಾಗೂ ಜನಪದ ಸಾಹಿತ್ಯದಲ್ಲಿ ಎಂದು ತೋರುತ್ತದೆ. ವೇದ ಉಪನಿಷತ್ತುಗಳ ಕೆಲವು ಭಾಗಗಳು ಒಳ್ಳೆಯ ಕಾವ್ಯವಾಗಿದೆ. ಭರತಖಂಡದಲ್ಲಿ ಮಹಾಕಾವ್ಯ, ನಾಟಕಗಳಿಗೆ ಋಗ್ವೇದದ ಸಂವಾದ ಸೂಕ್ತಗಳ ಆಕರವೆಂದು ಹೇಳುತ್ತಾರೆ. ಕವಿ ಎಂಬ ಮಾತು ಉಪನಿಷತ್ತಿನಲ್ಲಿ ಗೋಚರಿಸುತ್ತದೆ (ಕವಿರ್ಮನೀಷೀ ಪರಿಭೂಃ ಸ್ವಯಂಭೂಃ) ಕವಿಯೂ ಪುರೋಹಿತನೂ ಮೊದಲು ಅಭಿನ್ನರಾಗಿದ್ದರು. ಧಾರ್ಮಿಕ ವಿಧಿಗಳಿಂದ ಕಾವ್ಯ ಬಿಡುಗಡೆಗೊಂಡು ಲೌಕಿಕವಾದುದು ಈಚೆಗೆ. ಆದರೆ ಧಾರ್ಮಿಕ ಹಾಗೂ ಮಾಂತ್ರಿಕ ಮಹತ್ತ್ವ ಪಡೆದಿದ್ದ ಕಾಲದಲ್ಲೂ ಅದು ಮನೋರಂಜನೆಯ ಸಾಧನವಾಗಿತ್ತು; ಲೌಕಿಕ ಪರಿಣಮಿಸಿದ ಮೇಲೂ ಅದು ಧಾರ್ಮಿಕ ಉದ್ದೇಶಗಳಿಗೆ ವಾಹಕವಾಗುವುದು ತಪ್ಪಲಿಲ್ಲ. ಕವಿ ಯಾವಾಗಲೂ ಋಷಿ, ದ್ರಷ್ಟಾರ ಎಂದೇ ಪರಿಗಣಿತನಾಗಿದ್ದಾನೆ. ಭಾರತೀಯ ದೃಷ್ಟಿಯಂತೂ ಕಲೆಗಾಗಿ ಕಲೆ ಎಂಬುದನ್ನೆಂದೂ ಒಪ್ಪಿಲ್ಲ ; ಧರ್ಮ ಮತ್ತು ಕಾವ್ಯಧರ್ಮಗಳ ಸಮನ್ವಯವನ್ನು ಅದು ಪುರಸ್ಕರಿಸುತ್ತದೆ.

ಕಾವ್ಯವೆಂದರೇನೆಂಬುದನ್ನು ಒಂದು ಮಾತಿನಲ್ಲಿ ಹೇಳುವುದು ಅಸಾಧ್ಯ. ಬದಲಾಗಿ, ಅದರ ಸ್ವರೂಪವನ್ನು ವಿವರಿಸಬಹುದು, ಅದರ ಉದ್ದೇಶ ಪ್ರಯೋಜನಗಳನ್ನು ಪಟ್ಟಿಹಾಕಬಹುದು, ಓದುಗನ ಮೇಲೆ ಅದು ಎಸೆಗುವ ಪರಿಣಾಮಗಳನ್ನು ಲೆಕ್ಕಿಸಬಹುದು, ಕಾವ್ಯವನ್ನು ಕುರಿತ ದೃಷ್ಟಿಯೂ ಕಾಲದೇಶಾನುಗುಣವಾಗಿ ಭಿನ್ನ ಭಿನ್ನವಾಗಿದ್ದು, ವಿವಿಧ ಲಕ್ಷಣ ವಾಕ್ಯಗಳಿಗೆ ಎಡೆಕೊಟ್ಟಿದೆ; ಅವುಗಳಲ್ಲಿ ಐಕಮತ್ಯವಿಲ್ಲ. ಭಾರತೀಯರಲ್ಲೂ ಪಾಶ್ಚಾತ್ಯರಲ್ಲೂ ಕಾವ್ಯದ ಬಗೆಗೆ ಸಾಕಷ್ಟು ಜಿಜ್ಞಾಸೆ ನಡೆದಿದೆ. ಭಾರತೀಯರು ಸಿದ್ಧಕಾವ್ಯವನ್ನು ಕುರಿತು ವಿಚಾರ ಮಾಡಿದರೆ, ಪಾಶ್ಚತ್ಯರು ಕವಿಯ ಮನೋವ್ಯಾಪಾರಗಳನ್ನೂ ವಿಶ್ಲೇಷಿಸಿದ್ದಾರೆ.

ಮನಸ್ಸಿನ ಭಾವಗಳನ್ನು ಲಯಬದ್ಧ ಭಾಷೆಯಲ್ಲಿ ಸುಮೂರ್ತವಾಗಿ ಅಭಿವ್ಯಕ್ತಿಗೊಳಿಸುವ ಕಲೆ ಎಂದು ಕಾವ್ಯದ ಲಕ್ಷಣವನ್ನು ಸ್ಥೂಲವಾಗಿ ಹೇಳಬಹುದು. ಪೌರಸ್ತ್ಯ ಹಾಗೂ ಪಾಶ್ಚಾತ್ಯ ಮೀಮಾಂಸಕರ ಅಭಿಪ್ರಾಯಗಳನ್ನು ಇಲ್ಲಿ ಗಮನಿಸುವುದು ಉಪಯುಕ್ತ.

ಭಾರತೀಯ ಲಕ್ಷಣ ನಿರೂಪಣೆ :- ಶಬ್ದಾರ್ಥಗಳು ಕೂಡಿ ಕಾವ್ಯವೆಂದು ಭಾಮಹ. ಕಾವ್ಯದ ಶರೀರವೆಂದರೆ ಇಷ್ಟವಾದ ಅರ್ಥವನ್ನುಳ್ಳ ಪದಸಮೂಹ ಎಂದು ದಂಡಿ ಹೇಳುತ್ತಾರೆ. ವಾಮನ ಒಂದು ಕಡೆ ಕಾವ್ಯ ಅಲಂಕಾರದಿಂದ ಗ್ರಾಹ್ಯವಾಗುತ್ತದೆ, ಸೌಂದರ್ಯವೆ ಅಲಂಕಾರ ಎಂದೂ ಮತೊಂದು ಕಡೆ ರೀತಿಯೇ ಕಾವ್ಯದ ಆತ್ಮವೆಂದೂ ಹೇಳಿದ್ದಾನೆ. ವಕ್ರಕವಿವ್ಯಾಪಾರದಿಂದ ಕೂಡಿದ್ದೂ ಬಲ್ಲವರಿಗೆ ಆಹ್ಲಾದವನ್ನುಂಟುಮಾಡತಕ್ಕದ್ದೂ ಆದ ಬಂಧದಲ್ಲಿ ವ್ಯವಸ್ಥೆಗೊಂಡ ಶಬ್ದಾರ್ಥಗಳು ಒಟ್ಟಿಗೆ ಕಾವ್ಯ ಎಂದು ಕುಂತಕ. ಕಾವ್ಯದ ಆತ್ಮ ಧ್ವನಿ ಎಂದು ಆನಂದವರ್ಧನ. ರಸಾತ್ಮಕವಾದ ವಾಕ್ಯವೆ ಕಾವ್ಯವೆಂದು ವಿಶ್ವನಾಥ. ರಮಣೀಯಾರ್ಥವನ್ನು ಪ್ರತಿಪಾದಿಸುವ ಶಬ್ದವೆ ಕಾವ್ಯವೆಂದು ಜಗನ್ನಾಥ ಲಕ್ಷಣೀಕರಿಸಿದ್ದಾರೆ.

ಪಾಶ್ಚತ್ಯ ಲಕ್ಷಣ ನಿರೂಪಣೆ :- ಶಕ್ತಭಾವಗಳ ಸಹಜ ಉಕ್ಕಿ ಹರಿಯುವಿಕೆ, ಎಲ್ಲ ಜ್ಞಾನದ ಉಸಿರು ಮತ್ತು ಸೂಕ್ಷ್ಮತರ ಚೈತನ್ಯವೇ ಕಾವ್ಯವೆಂದು ವಡ್ಸ್ ವರ್ತ್ . ಕಾವ್ಯವೆಂದರೆ ಬುದ್ಧಿಯ ನೆರವಿಗೆ ಕಲ್ಪನೆಯನ್ನು ಆಮಂತ್ರಿಸುವುದರ ಮೂಲಕ ಸಂತೋಷವನ್ನು ಸತ್ಯದೊಡನೆ ಕೂಡಿಸುವ ಕಲೆ ಎಂದು ಡಾ|| ಜಾನ್ಸನ್ . ಕಾವ್ಯ ವಿಜ್ಞಾನ ಕೃತಿಗಳಿಗೆ ವಿರುದ್ಧವಾದ ರಚನಾ ಪ್ರಕಾರ, ಅದರ ಸದ್ಯದ ಗುರಿ ಸಂತೋಷವೆ ಹೊರತು ಸತ್ಯವಲ್ಲ, ಕಾವ್ಯವೆಂದರೆ ಅತ್ಯುತ್ತಮ ಕ್ರಮದಲ್ಲಿ ಜೋಡಣೆಗೊಂಡ ಅತ್ಯುತ್ತಮ ಶಬ್ದಗಳು ಎಂದು ಕೋಲ್‍ರಿಜ್. ಕಲ್ಪನೆಯ ಅಭಿವ್ಯಕ್ತಿಯೇ ಕಾವ್ಯ ಎಂದ ಷೆಲ್ಲಿ . ಸತ್ಯ ಸೌಂದರ್ಯ ಶಕ್ತಿಗಳನ್ನು ಕುರಿತ ಆವೇಶದ ಉದ್ಗಾರವೇ ಕಾವ್ಯವೆಂದು ಲೇ ಹಂಟ್ . ಜೀವನದ ವಿಮರ್ಶೆ ಮಾನವ ಶಬ್ದಗಳು ಮುಟ್ಟಬಹುದಾದ ಅತ್ಯಂತ ಆನಂದಪ್ರದವೂ ಪರಿಪೂರ್ಣವೂ ಆದ ಅಭಿವ್ಯಕ್ತಿ ಪ್ರಕಾರ ಎಂದು ಮ್ಯಾಥ್ಯೂ ಆರ್ನಾಲ್ಡ್ . ಯಾವುದರಲ್ಲಿ ಜ್ಞಾನ ಕೂಡಲೆ ಭಾವವಾಗಿ ಪರಿವರ್ತಿತವಾಗುತ್ತದೋ ಮತ್ತು ಜ್ಞಾನದ ಒಂದು ಹೊಸ ಅಂಗವಾಗಿ ಮಾಪೊಳೆಯುತ್ತದೋ ಅಂಥ ಆತ್ಮವನ್ನು ಪಡೆದಿರುವಿಕೆಯೇ ಕಾವ್ಯವೆಂದು ಜಾರ್ಜ್ ಎಲಿಯಟ್. ಉದಾತ್ತ ಭಾವಗಳಿಗೆ ಉದಾತ್ತ ಭೂಮಿಕೆಯನ್ನು ಕಲ್ಪನೆಯಿಂದ ಧ್ವನಿಸುವಿಕೆಯೇ ಕಾವ್ಯ ಎಂದು ಜಾನ್ ರಕ್ಕ್ಸಿನ್. ಬದುಕಿನ ಬಗೆಗೆ ವ್ಯಕ್ತಿಯ ಪ್ರತಿಕ್ರಿಯೆಗಳನ್ನು ದಾಖಲುಮಾಡುವ ಕರಾರುವಾಕ್ಕು ಉಪಕರಣವೇ ಕಾವ್ಯ ಎಂದು ಲೂಯಿ ಮೆಕ್ನೀಸ್-ಹೇಳುತ್ತಾರೆ.

ಲೌಕಿಕವಾದ ಭಾವ ಸಾಧಾರಣೀಕರಣಗೊಂಡು ರಸವಾಗಿ ಪರಿಣಮಿಸಿ ಆಸ್ವಾದನೀಯವಾಗುತ್ತದೆ ಎಂಬುದು ಭಾರತೀಯ ಆಲಂಕಾರಿಕರ ಮತ. ಈ ರಸಸಿದ್ಧಾಂತ ಅವರು ಜಗತ್ತಿಗೆ ಕೊಟ್ಟ ವಿಶಿಷ್ಟವಾದ ಕೊಡುಗೆ. ಪಾಶ್ಚತ್ಯರಲ್ಲಿ ಇದಕ್ಕೆ ಸಂವಾದಿಯಾದ ತತ್ತ್ವವಿಲ್ಲ, ಆದರೂ ಅರಿಸ್ಟಾಟಲನ ಕತಾರ್ಸಿಸ್ ಸಿದ್ಧಾಂತ, ' (ಕಾವ್ಯವೆಂದರೆ) ಶಮ ಸ್ಥಿತಿಯಲ್ಲಿ ಸ್ಮøತವಾದ ಭಾವಗಳು' ಎಂಬ ವಡ್ರ್ಸ್‍ವರ್ತನ ಮಾತು. ಕಾವ್ಯ ವ್ಯಕ್ತಿತ್ವದ ಅಭಿವ್ಯಕ್ತಿಯಲ್ಲ, ಅದರಿಂದ ಪಲಾಯನ ಎಂಬ ಟಿ.ಎಸ್. ಎಲಿಯಟ್ಟನ ಉಕ್ತಿ-ಇವು ಭಾರತೀಯ ರಸತತ್ತ್ವಕ್ಕೆ ನಿಕಟವಾಗಿವೆ

ಪ್ರತಿಭೆಯೇ ಕಾವ್ಯಕ್ಕೆ ಭಾರತೀಯ ಆಲಂಕಾರಿಕರ ನಿರ್ಣಯ, ಕವಿತ್ವ ಬೀಜಂ ಪ್ರತಿಭಾನಂ ಎಂದಿದ್ದಾನೆ- ವಾಮನ. ಹೊಸ ಹೊಸದನ್ನು ಉಲ್ಲೇಖಿಸುವ (ಅಥವಾ ಹೊಳೆಯಿಸುವ) ಪ್ರಜ್ಞೆಯೇ ಪ್ರತಿಭೆ, ಆ ಪ್ರತಿಭೆಯ ಉಸಿರಿನಿಂದ ಜೀವ ತುಂಬಿ ವರ್ಣಿಸಬಲ್ಲ ನಿಪುಣನೇ ಕವಿ, ಕವಿಕರ್ಮವೇ ಕಾವ್ಯ ಎಂಬುದು ಭಟ್ಟತೌತನ ವಿವರಣೆ. ಅಪೂರ್ವವಸ್ತು ನಿರ್ಮಾಣದ ಸಾಮರ್ಥ್ಯವುಳದ್ದು ಎಂದು ಅಭಿನವಗುಪ್ತನೂ ಪ್ರತಿಭೆಯ ಲಕ್ಷಣ ಹೇಳಿದ್ದಾನೆ. ಕವಿ ಪ್ರತಿಭೆಯ ಬಲದಿಂದ, ಸಮಾಹಿತ ಚಿತ್ತವಾಗಿ ಹೊಸ ಹೊಸ ಭಾವಗಳನ್ನು, ಅರ್ಥಗಳನ್ನು ಕಾಣುತ್ತಾನೆ ; ಅವನಿಗೆ ಲೋಕ ವಸ್ತುಗಳು ತಮ್ಮ ರಹಸ್ಯವನ್ನು ಬಿಟ್ಟುಕೊಡುತ್ತವೆ ; ಅವುಗಳ ಜೀವಾಳವೆ ಅವನಿಗೆ ವಶವಾಗುತ್ತದೆ. ಅದೇ ಪದಸಮೂಹ, ಅದೇ ಅರ್ಥಸಂಪತ್ತು-ಆದರೂ ಕಟ್ಟುವ ಕೌಶಲದಿಂದ ಕಾವ್ಯ ಹೊಸದಾಗುತ್ತದೆ ಎಂದಿದ್ದಾನೆ ರುದ್ರಟ. ದಿನನಿತ್ಯದ ಸಾಮಾನ್ಯವಾದ ಮಾತು ಕಾವ್ಯದಲ್ಲಿ ಮಂತ್ರವಾಗುತ್ತದೆ. ಕವಿ ಪ್ರತಿಭೆಯ ವಿದ್ಯುತ್ತು ಅದರಲ್ಲಿ ಹರಿಯುವುದರಿಂದ, ಪ್ರತಿಭೆ, ವ್ಯುತ್ಪತ್ತಿ, ಅಭ್ಯಾಸ ,ಸ್ಫೂರ್ತಿ ಮುಂತಾದವು ಕವಿತೆಗೆ ಪರಿಕರಗಳು ಎಂದು ಹೇಳಾಲಾಗಿದೆ.

ಏನು ಬೇಕಾದರೂ ಕಾವ್ಯಕ್ಕೆ ವಸ್ತುವಾಗಬಲ್ಲುದು; ಕವಿ ಪ್ರತಿಭೆಯಿಂದು ಅದು ರಸಾನುಭವಕಾರಿಯಾಗುತ್ತದೆ. ರಮ್ಯ, ಅಸಹ್ಯ, ಉದಾರ, ನೀಚ, ಉಗ್ರ, ಪ್ರಸನ್ನ, ವಿಕೃತ-ಹೀಗೆ ವಸ್ತು ಯಾವುದಾದರೂ ಆಗಿರಲಿ, ಕಡೆಗೆ ವಸ್ತುವಲ್ಲದ್ದೆ ಆಗಿರಲಿ, ಕವಿಭಾವಕರ ಭಾವನೆಗೆ ವಿಷಯವಾದ ಮೇಲೆ ರಸಮಯವಾಗದ್ದು ಲೋಕದಲ್ಲಿ ಏನೊಂದೂ ಇಲ್ಲ-ಎಂದು ಧನಂಜಯನ ಹೇಳಿಕೆ.

ಅಪಾರವಾದ ಕಾವ್ಯಪ್ರವಂಚದಲ್ಲಿ ಕವಿಯೇ ಬ್ರಹ್ಮ ; ತನಗೆ ರುಚಿಸಿದಂತೆ ಅವನು ವಿಶ್ವವನ್ನು ಪರಿವರ್ತಿಸುತ್ತಾನೆ-ಎಂದು ಕವಿಯ ಅಗ್ಗಳಿಕೆಯನ್ನು ಆನಂದವರ್ಧನ ಸಾರಿದ್ದಾನೆ. ಕಾವ್ಯ ನಿಯತಿಕೃತ ನಿಯಮರಹಿತವೂ ಹ್ಲಾದೈಕಮಯವೂ ಅನನ್ಯ ಪರತಂತ್ರವೂ ನವರಸರುಚಿರವೂ ಅದು ಮಮ್ಮಟನ ಉಕ್ತಿ. ಕಾವ್ಯ ಪ್ರಪಂಚ ಸ್ವತಂತ್ರವಾದುದು, ಸಂಪೂರ್ಣವಾದುದು, ಸ್ವಯಮಧಿಕಾರವುಳ್ಳದ್ದು ಎಂಬ ಎ.ಸಿ. ಬ್ರಾಡ್ಲೆಯ ಮಾತು ಈ ಭಾರತೀಯ ದೃಷ್ಟಿಗೆ ಉಪಷ್ಟಂಭಕವಾಗಿದೆ. ಆದರೆ ಕಾವ್ಯಸತ್ಯ ಲೋಕಸತ್ಯಕ್ಕೆ ವಿರುದ್ಧವಾದುದು ಎಂದು ಅರ್ಥವಲ್ಲ ; ನಿಯತಿಕೃತ ನಿಯಮರಹಿತ, ಅನನ್ಯ ಪರತಂತ್ರ ಎಂಬ ಮಾತುಗಳು ಕಾವ್ಯದ ಅಭಿವ್ಯಕ್ತಿ ವಿಧಾನವನ್ನು ಕುರಿತವು. ಕಾವ್ಯ ಚಿತ್ರಿಸುವುದು ಭಾವಸತ್ಯವನ್ನೆ ವಿನಾ ಬಾಹ್ಯಸತ್ಯವನ್ನಲ್ಲ. ಭಾವಸತ್ಯ ಪ್ರತಿಮಾವಿಧಾನದ ಮೂಲಕ ಮಾತ್ರವೆ ಅಭಿವ್ಯಕ್ತವಾಗಬಲ್ಲುದು. ಈ ವಿಧಾನ ಪ್ರತಿಕೃತಿವಿಧಾನದಂತಲ್ಲದೆ ನಿಯಮರಹಿತವಾಗುವುದು ಅನಿವಾರ್ಯ. ಅಂತೂ ಕಾವ್ಯಕ್ಕೂ ಲೋಕಕ್ಕೂ ಅಂತರ ಸಂಬಂಧ ಉಂಟೇ ಉಂಟು. ಲೋಕವನ್ನು ಕಟ್ಟಿಕೊಂಡೇ ಕಾವ್ಯ ಮೇಲೇರಬೇಕು. ಅದು ಸಂಭಾವ್ಯತೆ ಗಡಿಯನ್ನು ದಾಟ ಕೂಡದು. ಔಚಿತ್ಯತತ್ತ್ವ ಇಲ್ಲಿಗೆ ವಿಸ್ತರಿಸಿ, ಕವಿಕಲ್ಪನೆಯಲ್ಲಿ ಔಚಿತ್ಯವಿರಬೇಕೆಂದು ಹೇಳಬಹುದು. ಅಷ್ಟರ ಮಟ್ಟಿಗೆ ಕಾವ್ಯದಲ್ಲಿ ಬುದ್ಧಿಯ ಅಂಶ ಅವಶ್ಯ. "ಬುದ್ಧಿ- ಭಾವಗಳ ವಿದ್ಯುದಾಲಿಂಗನವೇ ಪ್ರತಿಭೆ ಕುವೆಂಪು" ಎಂಬ ಸೂಕ್ತಿ ಈ ದೃಷ್ಟಿಯಿಂದ ಅರ್ಥವತ್ತಾಗಿ ತೋರುತ್ತದೆ.

ಕಾವ್ಯ ದೃಷ್ಟಿಯೂ ಹೌದು, ಸೃಷ್ಟಿಯೂ ಹೌದು. ಬರಿಯ ದರ್ಶನದಿಂದಲೇ ಕವಿಪಟ್ಟ ಸಿಕ್ಕಲಾರದು; ವರ್ಣನವೂ ಅಷ್ಟೇ ಮುಖ್ಯ. 'ಋಷಿಯಲ್ಲದ ಕವಿಯಿಲ್ಲ : ದರ್ಶನವುಳ್ಳವನೇ ಋಷಿ' ಎಂದು ಹೇಳುವ ಭಟ್ಟತೌತ ' ತತ್ತ್ವದರ್ಶನವನ್ನು ಹೊಂದಿರುವಷ್ಟಕ್ಕೆ ಒಬ್ಬನಿಗೆ ಕವಿಯೆಂಬ ಹೆಸರು ಶಾಸ್ತ್ರಗಳಲ್ಲಿ ಉಕ್ತವಾಗಿದೆ. ಆದರೆ ದರ್ಶನ ಮತ್ತು ವರ್ಣನ ಇವೆರಡೂ ಇದ್ದರೆ ಲೋಕದಲ್ಲಿ ಕವಿಯೆಂದು ಕರೆಯುವುದು' ಎಂದು ಅದಕ್ಕೆ ವಿವರಣೆ ನೀಡಿದ್ದಾನೆ. ಕಾವ್ಯಕ್ಕೆ ಪರಿಪೂರ್ಣತೆ ಬರುವುದು' ಅದಕ್ಕೆ ವಿವರಣೆ ನೀಡಿದ್ದಾನೆ. ಕಾವ್ಯಕ್ಕೆ ಪರಿಪೂರ್ಣತೆ ಬರುವುದು ಅದನ್ನು ಬರೆದು ಮುಗಿಸಿದಾಗಲೇ ಕವಿತೆಯನ್ನು ಬರೆದಾಗುವ ತನಕ, ತಾನು ಏನನ್ನು ಬರೆಯುತ್ತಿದ್ದೇನೆಂಬುದು ಕವಿಗೆ ಪೂರ್ತಿ ಗೊತ್ತಿರುವುದಿಲ್ಲ ಎಂಬ ಸಿ.ಡಿ ಲೂಯಿಸ್ ಮಾತುಗಳನ್ನು ನೆನೆಯಬಹುದು. ಕಾವ್ಯರಚನೆ ಪ್ರಜ್ಞಾಪೂರ್ವಕವಾದ ಕ್ರಿಯೆಯಲ್ಲ ಎಂಬುದನ್ನೂ ಇದು ಸೂಚಿಸುತ್ತದೆ. ವೀರನಾರಾಯಣನೆ ಕವಿ, ಲಿಪಿಕಾರ ಕುಮಾರವ್ಯಾಸ ಎಂಬ ಮಾತಿನಲ್ಲಿ ಸುಪ್ತಮನಸ್ಸಿನ ಪ್ರೇರಣೆ ಪ್ರಚೋದನೆಗಳು ಧ್ವನಿತವಾಗಿವೆ. ಕಾವ್ಯ ಪೂರ್ಣವಾಗಿ ಅಪ್ರಜ್ಞಾಪೂರ್ವಕವಾದುದೂ ಅಲ್ಲ. ತಂತ್ರದ ವಿಷಯದಲ್ಲಿ ಕವಿ ತಕ್ಕಮಟ್ಟಿಗೆ ಎಚ್ಚರದಿಂದಲೇ ಇರಬೇಕಾಗುತ್ತದೆ. ಬುದ್ಧಿಯ ಕೆಲಸವೂ ಅಲ್ಲಿ ಉಂಟು. ಒಟ್ಟಿನಲ್ಲಿ ಕಾವ್ಯಸೃಷ್ಟಿಯೊಂದು ಬೌದ್ಧಿಕ ಕ್ರಿಯೆಯಲ್ಲ; ಸ್ಫೂರ್ತಿಯ ಪಾಲು ಅಲ್ಲಿ ವಿಶೇಷ.

ಕವಿಯ ಮನಸ್ಸಿನಲ್ಲಾದ ಅನುಭವನ್ನು ಕಾವ್ಯ ಯಥಾವತ್ತಾಗಿ ವಾಚಕನ ಮನಸ್ಸಿನಲ್ಲಿ ಮೂಡಿಸಬಲ್ಲುದೇ ಎಂಬುದೊಂದು ಪ್ರಶ್ನೆ. ವಾಚಕ ಪಡೆಯುವುದು ಸದೃಶಾನುಭವವನ್ನೇ ಹೊರತು ಅದೇ ಅನುಭವವನ್ನಲ್ಲ ಎಂದು ಹೇಳುತ್ತಾರೆ. ಕ್ಲೈವ್ ಸ್ಯಾನ್‍ಸಂ ಹೇಳುವುದು ಗಮನಾರ್ಹ : ಕಾವ್ಯವೆಂದರೆ ಶಬ್ದಗಳ ಲಯಬದ್ಧ ರೂಪ : ಲೇಖಕನ ಕಲ್ಪನಾತ್ಮಕ-ಭಾವನಾತ್ಮಕ-ಬೌದ್ಧಿಕ ಅನುಭವವನ್ನು ವ್ಯಕ್ತ ಪಡಿಸುವಂಥದು ಮತ್ತು ವಾಚಕನ ಅಥವಾ ಶ್ರಾವಕನ ಚಿತ್ತದಲ್ಲಿ ಸದೃಶಾನುಭವವೊಂದನ್ನು ಅದು ಸೃಜಿಸುವ ರೀತಿಯಲ್ಲಿ ವ್ಯಕ್ತಪಡಿಸುವಂಥದು.

ಕಾವ್ಯಪ್ರಯೋಜನಗಳು ಹಲವು. ಕಾವ್ಯ ಯಶಸ್ವಿಗಾಗಿ, ಧನಾರ್ಜನೆಗಾಗಿ, ವ್ಯವಹಾರ ಜ್ಞಾನಕ್ಕಾಗಿ, ಅಮಂಗಳ ನಿವಾರಣೆಗಾಗಿ, ತತ್ಕಾಲದಲ್ಲಿ ಪರಮಾನಂದ ಪಡೆಯುವುದಕ್ಕಾಗಿ, ಕಾಂತೆಯಂತೆ ಉಪದೇಶಿಸುವುದಕ್ಕಾಗಿ ಎಂದು ಮಮ್ಮಟನ ಎಣಿಕೆ. ಆದರೆ ರಸಾನಂದವನ್ನು ಅವನು ಎಲ್ಲ ಪ್ರಯೋಜಗಳಿಗೂ ಕಿರೀಟಪ್ರಾಯವಾದುದು (ಸಕಲ ಪ್ರಯೋಜನಮೌಲಿಭೂತ) ಎಂದಿದ್ದಾನೆ. ಪಾಶ್ಚಾತ್ಯರದೂ ಇದೇ ನಿಲವು. ಆನಂದ ಕಾವ್ಯದ ಏಕೈಕ ಗುರಿಯಲ್ಲದಿದ್ದರೂ ಪ್ರಧಾನವಾದ ಗುರಿ. ಕವಿತೆ ಆನಂದಗೊಳಿಸುತ್ತಲೇ ತಿಳಿವಳಿಕೆ ನೀಡುತ್ತದೆ-ಎಂದಿದ್ದಾನೆ- ಡ್ರೈಡನ್ . ಕಲ್ಪನೆ ನೈತಿಕ ಒಳ್ಪಿನ ಸಾಧನ ಎಂಬುದು ಷೆಲ್ಲಿಯ ಉಕ್ತಿ. ಶಿವೇತರಕ್ಷತಯೇ ಎಂಬುದಕ್ಕೆ ಸಂವಾದಿಯಾದುದು. ಆದರೂ, ಕಾವ್ಯ ಪುರುಷಾರ್ಥ ಸಾಧಕವಾದುದು ಎಂಬ ದೃಷ್ಟಿ ವಿಶೇಷವಾಗಿ ಭಾರತೀಯರದು.

ಕಾವ್ಯಕ್ಕೆ ಛಂದಸ್ಸು ಎಷ್ಟರಮಟ್ಟಿಗೆ ಆವಶ್ಯಕ ಎಂಬುದು ಇನ್ನೊಂದು ಮೂಲಭೂತವಾದ ಪ್ರಶ್ನೆ. ಛಂದಸ್ಸಿಲ್ಲದೆ ಕಾವ್ಯವಿಲ್ಲ ಎಂದು ಕೆಲವರ ಮತ: ಛಂದೋಬದ್ಧ ರಚನೆ ಎಂದೇ ಜಾನ್ಸನ್ ಕಾವ್ಯದ ಲಕ್ಷಣ ಹೇಳುತ್ತಾನೆ. ಆದರೆ ಛಂದಸ್ಸೊಂದೇ ಕಾವ್ಯದ ಅಳತೆಗೋಲಲ್ಲ; ವಾಸ್ತವವಾಗಿ ಎಷ್ಟೋ ಛಂದೋಬದ್ಧ ರಚನೆಗಳು ಕಾವ್ಯವೆ ಅಲ್ಲ; ಪ್ರಾಚೀನ ಭಾರತದಲ್ಲಿ ಎಲ್ಲ ಶಾಸ್ತ್ರಗಳನ್ನೂ ಪದ್ಯರೂಪದಲ್ಲೆ ಬರೆದಿಡುತ್ತಿದ್ದರು, ನೆನಪಿಟ್ಟುಕೊಳ್ಳುವ ಸೌಕರ್ಯಕ್ಕಾಗಿ, ಛಂದಸ್ಸು ಕಾವ್ಯಕ್ಕೆ ಅನಿವಾರ್ಯವಲ್ಲದಿದ್ದರೂ ಅಪೇಕ್ಷಣೀಯ; ಅದು ಕಾವ್ಯಪರಿಪೂರ್ಣತೆಯ ಒಂದಂಗ. ನಿಯತವಾದ ಛಂದಸ್ಸಿಲ್ಲದಿದ್ದರೂ ಅನಿಯತವಾದ ಲಯ ಕವಿತೆಗಿರಬೇಕು, ಇದ್ದೇ ಇರುತ್ತದೆ; ಏಕೆಂದರೆ, ಭಾವಪೂರ್ಣವಾಗಿ ಏನ್ನನ್ನೆ ಹೇಳಿದರೂ ಅದು ಲಯಾನ್ವಿತವಾಗಿಯೆ ಹೊಮ್ಮುತ್ತದೆ. ಕನ್ನಡದ ವಚನಗಳು, ಠಾಕೂರರ ಗೀತಾಂಜಲಿ, ವಾಲ್ಟ್ ವಿಟ್ಮನ್ನನ ಲೀವ್ಸ್ ಆಫ್ ಗ್ರಾಸ್ ಮೇಲುನೋಟಕ್ಕೆ ಗದ್ಯದಂತೆ ಭಾಸವಾದರೂ ಅವುಗಳಲ್ಲಿ ಲಯವಿದೆ. ಇಂದಿನ ಕವಿತೆಯಲ್ಲಿ ಮುಕ್ತ ಛಂದಸ್ಸು, ಆಡುಮಾತಿನ ಲಯ ಕಂಡುಬರುತ್ತದೆ. ಗದ್ಯವಾಗದಿರುವುದಕ್ಕಾಗಿಯೇ ಕವಿತೆ ನಿರಂತರವಾಗಿ ಯತ್ನಿಸಿದೆ, ಎಂದೊಬ್ಬ ವಿಮರ್ಶಕ ಹೇಳಿದ್ದಾನೆ. ಛಂದಸ್ಸಿನ ವಿಷಯದಲ್ಲಿ ಭಾರತೀಯ ದೃಷ್ಟಿ ಖಚಿತವಾದದ್ದು, ಛಂದಸ್ಸು ಅದು ಅನಿವಾರ್ಯವೆಂದು ಒಪ್ಪಿಲ್ಲ : ಕಾವ್ಯೇಷು ನಾಟಕಂ ರಮ್ಯಂ ಎಂಬ ಉಕ್ತಿಯನ್ನು ಸ್ಮರಿಸಬಹುದು. ಗದ್ಯಕಾವ್ಯ ಪದ್ಯಕಾವ್ಯಗಳೆರಡನ್ನೂ ಕಾವ್ಯವೆಂದು ಹಿಂದಿನವರು ಪರಿಗಣಿಸಿದ್ದರು. ನಾಟಕವನ್ನು ದೃಶ್ಯ ಕಾವ್ಯವೆಂದೂ ಉಳಿದುದನ್ನು ಶ್ರವ್ಯಕಾವ್ಯವೆಂದೂ ಕರೆಯುತ್ತಿದ್ದರು. ರಸಾತ್ಮಕವಾದುದೆಲ್ಲ ಅವರ ಪಾಲಿಗೆ ಕಾವ್ಯವಾಗಿತ್ತು. ಆದರೆ ಕಾದಂಬರಿಯಂಥ ಗದ್ಯಕಾವ್ಯಗಳಲ್ಲೂ ಲಯವನ್ನು ಗುರುತಿಸಬಹುದು. ಅಂತೂ ಲಯ ಕವಿತೆಗೆ ಮುಖ್ಯವಾದುದು. ಈ ದೃಷ್ಟಿಯಿಂದ, ಕಾವ್ಯವನ್ನು ಸಂಗೀತಾತ್ಮಕ ಆಲೋಚನೆ ಎಂದು ಕಾರ್ಲೈಲ್, ಸೌಂದರ್ಯದ ಲಯಬದ್ಧ ಸೃಷ್ಟಿ ಎಂದು ಪೋಪ್ ಕರೆದುದು ಉಚಿತವೇ ಆಗಿದೆ.

ಕಾವ್ಯವನ್ನು ವಿವಿಧ ದೃಷ್ಟಿಕೋನಗಳಿಂದ ಅಭ್ಯಾಸ ಮಾಡಲಾಗಿದೆ; ಆಯಾ ದೃಷ್ಟಿಗನುಸಾರವಾಗಿ ಬೇರೆ ಬೇರೆ ವಿಮರ್ಶವಿಧಾನಗಳು ರೂಪಗೊಂಡಿವೆ. ಇತಿಹಾಸದ ಹಿನ್ನೆಲೆಯಲ್ಲಿ, ಕವಿಯ ವೈಯಕ್ತಿಕ ಜೀವನದ ಹಿನ್ನೆಲೆಯಲ್ಲಿ ಕಾವ್ಯವನ್ನು ನೋಡುವ ಪ್ರಯತ್ನಗಳು ನಡೆದಿವೆ, ತಂತ್ರದ ದೃಷ್ಟಿಯಿಂದ-ಶೈಲಿ ಛಂದಸ್ಸು ಅಲಂಕಾರಗಳನ್ನು ಗಮನಿಸಿ-ಅದನ್ನು ವಿವೇಚಿಸುವುದುಂಟು. ಅದನ್ನೊಂದು ಸಾಮಾಜಿಕ ಸಂಗತಿಯನ್ನಾಗಿ ಪರಿಗಣಿಸಿದವರಿದ್ದಾರೆ. ಮನೋವೈಜ್ಞಾನಿಕ ದೃಷ್ಟಿ ಎಲ್ಲಕ್ಕಿಂತ ಮುಖ್ಯವಾದುದು; ಇಲ್ಲಿಯೂ ಎರಡು ಪಕ್ಷಗಳಿವೆ. ಕಾವ್ಯ ಕವಿಯ ವೈಯಕ್ತಿಕ ಜೀವನದ ಅಭಿವ್ಯಕ್ತಿ ಎಂಬುದು ಒಂದು ಸಿದ್ಧಾಂತ ; ಫ್ರಾಯ್ಡ್ ಇದನ್ನು ಪ್ರತಿನಿದಿಸುತ್ತಾನೆ. ಅದು ಸಮಷ್ಟಿಪ್ರಜ್ಞೆಯ ಅಭಿವ್ಯಕ್ತಿ ಎಂಬುದು ಮತ್ತೊಂದು ವಾದ; ಯೂಂಗ್ ಇದರ ಪ್ರತಿಪಾದಕ. ಅವನ ಪ್ರಕಾರ ಕಲೆಯಲ್ಲಿ ವೈಯಕ್ತಿಕತೆಯೊಂದು ಪಾಪ. ಉನ್ನತ ಕವಿತೆ ಮನುಕುಲದ ಬದುಕಿನಿಂದ ತನ್ನ ಶಕ್ತಿಯನ್ನು ಪಡೆದುಕೊಳ್ಳುತ್ತದೆ; ಅದನ್ನು ವೈಯಕ್ತಿಕಾಂಶಗಳಿಂದ ನಿಷ್ಪತ್ತಿಗೊಳಿಸಲು ಯತ್ನಿಸಿದರೆ ಅದರ ಅರ್ಥವನ್ನು ಪೂರ್ತಿ ಕಳೆದುಕೊಳ್ಳುತ್ತೇವೆ ಎಂದು ಯೂಂಗ್ ಹೇಳುತ್ತಾನೆ. ಸಾಹಿತ್ಯದಲ್ಲಿ ಕಂಡುಬರುವ ಆದಿ ಪ್ರತಿಮೆಗಳ ಮೇಲೆ ಅವನ ಸಮಷ್ಟಿ ಪ್ರಜ್ಞೆಯ ತತ್ತ್ವ ಬೆಳಕು ಚೆಲ್ಲುತ್ತದೆ. ಕಾವ್ಯ ಕವಿಯ ವೈಯಕ್ತಿಕ ಭಾವಗಳ ಅಭಿವ್ಯಕ್ತಿಯಾಗಿರಬಹುದು. ಆದರೆ ಅದು ಕೇವಲ ಖಾಸಗಿಯಾಗಿರದೆ ಸಾರ್ವತ್ರಿಕತೆಯನ್ನುಳ್ಳದ್ದಾಗಿರಬೇಕು.

ಕಾವ್ಯವನ್ನು ಮುಖ್ಯವಾಗಿ ಎರಡು ವಿಭಾಗ ಮಾಡುತ್ತಾರೆ : ವಸ್ತುನಿಷ್ಠ ಹಾಗೂ ವ್ಯಕ್ತಿ ನಿಷ್ಠ (ನಾಟಕೀಯ ಎಂಬುದೊಂದನ್ನು ಎಲಿಯಟ್ ಸೇರಿಸುತ್ತಾನೆ), ಮಹಾಕಾವ್ಯ , ಕಥನ ಕವನ, ಲಾವಣಿ ರೊಮಾನ್ಸ್, ಇತಿವೃತ್ತ ಕವಿತೆ-ಮುಂತಾದ ಪ್ರಕಾರಗಳು ವಸ್ತುನಿಷ್ಠ ವಿಭಾಗದಲ್ಲಿ ಸೇರುತ್ತವೆ. ವ್ಯಕ್ತಿನಿಷ್ಠ ವಿಭಾಗ ಭಾವಗೀತೆಗಳ ಪ್ರಾಂತ ; ಇದರಲ್ಲಿ ಮತ್ತೆ ಪ್ರಗಾಥ, ಶೋಕಗೀತೆ, ಸಾನೆಟ್ ಮುಂತಾದ ಒಳ ಜಾತಿಗಳಿವೆ.

ಕಾವ್ಯಕ್ಷೇತ್ರಗಳಲ್ಲಿ ಕಾಲಕಾಲಕ್ಕೆ ಬೇರೆ ಬೇರೆ ಚಳವಳಿಗಳು ನಡೆದು ಪಂಥಗಳು ಹುಟ್ಟಿಕೊಂಡುದನ್ನು ನೋಡುತ್ತೇವೆ. ಪಾಶ್ಚಾತ್ಯರಲ್ಲಿ ಕ್ಲಾಸಿಕ್ ಕಾವ್ಯ, ರೊಮ್ಯಾಂಟಿಕ್ ಕಾವ್ಯ, ಮೆಟಫಿಸಿಕಲ್ ಕಾವ್ಯ, ಪ್ರತಿಮಾನಿಷ್ಠ ಕಾವ್ಯ, ಸಂಕೇತನಿಷ್ಠ ಕಾವ್ಯ, ಸರ್‍ರಿಯಲಿಸ್ಟಿಕ್ ಕಾವ್ಯ ಇತ್ಯಾದಿಯಾಗಿ ಹಲವು ಪ್ರಸ್ಥಾನಗಳಿವೆ. ಕನ್ನಡದಲ್ಲಿ ಈ ಶತಮಾನದಲ್ಲಿ ನವೋದಯ (ರೆನೆಸಾóನ್ಸ್) ಕಾವ್ಯ ಹಾಗೂ ನವ್ಯಕಾವ್ಯ ಎಂಬ ಎರಡು ಘಟ್ಟದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು ; ಇವುಗಳ ನಡುವಣ ಭೇದ ಗಮನಾರ್ಹವಾದುದು. ವಸ್ತುತಃ ಒಂದು ಪಂಥಕ್ಕೂ ಮತ್ತೊಂದಕ್ಕೂ ಇರುವ ವ್ಯತ್ಯಾಸ ಕಾವ್ಯದ ತಿರುಳಿಗೆ ಸಂಬಂಧಿಸಿದ್ದಲ್ಲ, ತಂತ್ರಕ್ಕೆ ಸಂಬಂಧಿಸಿದ್ದು. ಕಾವ್ಯದ ಆತ್ಮ ಯಾವಾಗಲೂ ಒಂದೇ; ಕಾಲ ಕಾಲಕ್ಕೆ ಹೊಸ ಹೊಸ ರೂಪ ತಳೆಯುತ್ತದೆ.

ಒಂದು ಕಾಲದಲ್ಲಿ ಕಾವ್ಯದ ಬಗ್ಗೆ ತೀವ್ರವಾದ ಆಕ್ಷೇಪಣೆಗಳಿದ್ದುದನ್ನು ನೆನೆಯಬೇಕು. ಕವಿಗಳು ಭಾವೊದ್ದೀಪನದ ಮೂಲಕ ದೌರ್ಬಲ್ಯವನ್ನುಂಟುಮಾಡುತ್ತಾರೆಂದೂ ಅವರನ್ನು ಆದರ್ಶರಾಜ್ಯದಿಂದ ಬಹಿಷ್ಕರಿಸಬೇಕೆಂದೂ ಗ್ರೀಕ್ ದಾರ್ಶನಿಕ ಪ್ಲೇಟೊ ಸಲಹೆ ಮಾಡಿದ್ದ. ಭರತಖಂಡದಲ್ಲೂ ಎಂದೋ ಒಮ್ಮೆ ಕಾವ್ಯಾಲಾಪವನ್ನು ಬಿಡತಕ್ಕದ್ದು ಎಂಬ ಘೋಷಣೆ ಮೊಳಗಿದಂತೆ ತೋರುತ್ತದೆ. ಅರಿಸ್ಟಾಟಲ್ ತನ್ನ ಕಾವ್ಯಮೀಮಾಂಸೆಯಲ್ಲಿ ಪ್ಲೇಟೂವಿನ ಆರೋಪಗಳಿಗೆ ಸಮರ್ಪಕವಾದ ಉತ್ತರವಿತ್ತು, ಕಾವ್ಯವನ್ನು ಉಜ್ಜ್ವಲವಾಗಿ ಸಮರ್ಥಿಸಿದ್ದಾನೆ. ಕಾವ್ಯ ಇತಿಹಾಸಕ್ಕಿಂತ ಉನ್ನತವೂ ತಾತ್ತ್ವಿಕವೂ ಆದದ್ದು ಎಂಬ ಅವನ ಸೂತ್ರ ಪ್ರಸಿದ್ಧವಾಗಿದೆ. ಇತಿಹಾಸ ನಡೆದ ಸಂಗತಿಯನ್ನಷ್ಟೇ ಹೇಳುತ್ತದೆ, ಕಾವ್ಯ ನಡೆಯಬಹುದಾದ ಸಂಗತಿಯನ್ನು ಹೇಳುತ್ತದೆ. ಇತಿಹಾಸಕ್ಕಿರುವ ಕಾಲದೇಶಗಳ ಕಟ್ಟು ಕಾವ್ಯಕ್ಕಿಲ್ಲ; ಅದು ಇರುವುದನ್ನೂ ಮಾತ್ರವೇ ನಿರೂಪಿಸುವುದಿಲ್ಲ, ಇರಬೇಕಾದುದನ್ನೂ ನಿರೂಪಿಸುತ್ತದೆ. ಷೆಲ್ಲಿ ಕವಿಗಳನ್ನು ಜಗತ್ತಿನ ಅನಧಿಕೃತ ಶಾಸನಕರ್ತರೆಂದು ಕರೆದಿದ್ದಾನೆ.

ಎಷ್ಟೇ ವಿವರಣೆಗಳನ್ನು ಕೊಟ್ಟರೂ ಕಾವ್ಯದ ರಹಸ್ಯವನ್ನು ಪೂರ್ಣವಾಗಿ ಭೇದಿಸುವುದು, ಅದರ ಬಗ್ಗೆ ಕಡೆಯ ಮಾತು ಹೇಳುವುದು ಶಕ್ಯವಿಲ್ಲ. ಅದು ನಿಯಮಗಳಿಗೆ ನಿಲುಕದು. ಅದೊಂದು ಮೋಡಿ; ' ಅದೊಂದು ಚೈತನ್ಯ. ಅದೆಲ್ಲಿಂದ ಬರುತ್ತದ್ದೋ ನಾವರಿಯೆವು. ನಾವು ಅಪ್ಪಣೆ ಮಾಡಿದಾಗ ಅದು ನುಡಿಯದು. ಅಥವಾ ನಮ್ಮ ಭಾಷೆಯಲ್ಲಿ ಉತ್ತರಿಸಿದು. ಅದು ನಮ್ಮ ಆಳಲ್ಲ, ಅರಸು' ಎಂಬ.ಎ.ಸಿ.ಬ್ರಾಡ್ಲೆಯ ಮಾತು ಮಾರ್ಮಿಕವಾಗಿದೆ.        (ಸಿ.ಪಿ.ಕೆ.)

ಪದ್ಯಕ್ಕೂ ಕಾವ್ಯಕ್ಕೂ ಇರುವ ವ್ಯತ್ಯಾಸವನ್ನು ವಿಮರ್ಶಕರು ಬಹು ಹಿಂದೆಯೇ ಗುರುತಿಸಿದರು. ಛಂದೋಬದ್ಧ ರಚನೆ ಎಲ್ಲ ಕಾವ್ಯವಲ್ಲ. ಗದ್ಯ, ಕಾವ್ಯ ಎಂಬ ಎರಡು ಮಾಧ್ಯಮಗಳಿವೆ; ಎರಡು ಮಾಧ್ಯಮಗಳಿರುವಾಗ ಅವುಗಳಲ್ಲಿ ವ್ಯತ್ಯಾಸಗಳಿರಲೇ ಬೇಕು. ಕಾವ್ಯವು ಸಾಧಿಸುವುದನ್ನು ಗದ್ಯವು ಸಾಧಿಸಲಾರದು. ಲಯವಿಲ್ಲದ ಕಾವ್ಯವಿಲ್ಲ, ಲಯಕ್ಕೆ ಒಂದು ಶಕ್ತಿ ಇದೆ, ಅದು ತನ್ನದೇ ಆದ ಜಗತ್ತನ್ನು ಸೃಷ್ಟಿಸುತ್ತದೆ. ಹೃದಯದ ಬಡಿತ, ಹಗಲು-ರಾತ್ರಿಗಳ ಕ್ರಮ, ಋತುಗಳ ಕ್ರಮ, ಎಲ್ಲ ಲಯಬದ್ಧ, ಲಯವು ಸೃಷ್ಟಿಯ ಹೃದಯದಲ್ಲಿದೆ, ಆದುದರಿಂದ ಅದಕ್ಕೆ ವಿಶಿಷ್ಟ ಶಕ್ತಿ ಎಂದು ಕೆಲವರು ವಿಮರ್ಶಕರ ಅಭಿಪ್ರಾಯ. ಲಯ, ಪ್ರತಿಮೆಗಳು, ವಿಶಿಷ್ಟ ರಚನೆ (ಕವನದ ರಚನೆಯು ಗದ್ಯದ ತರ್ಕಬದ್ಧ ರಚನೆಯಲ್ಲಿ)-ಇವುಗಳಿಂದಾಗಿ ಕಾವ್ಯವು ತನ್ನದೇ ಸುಸಂಬದ್ಧ ಜಗತ್ತನ್ನು ಸೃಷ್ಟಿಸುತ್ತದೆ. ಗದ್ಯವು ಅಭಿವ್ಯಕ್ತಿಗೊಳಿಸಲಾಗದೆ ಭಾವಸೂಕ್ಷ್ಮತೆಯನ್ನು, ಅನುಭವವನ್ನು ಕವನ ಅಭಿವ್ಯಕ್ತಿಗೊಳಿಸುತ್ತದೆ. ಕವನದಲ್ಲಿ ಶಬ್ದಗಳ ಕ್ರಮ ಮತ್ತು ನಾದಗಳೂ ಪರಿಣಾಮ ಬೀರುವುದರಲ್ಲಿ ಪಾತ್ರವಹಿಸುತ್ತವೆ. ಕವನದ ಲಯ, ಶಬ್ದಗಳು, ಅವುಗಳ ಜೋಡಣೆಯಿಂದ ಸೃಷ್ಟಿಯಾಗುವ ನಾದಭಾಗ, (ಕವನವನ್ನು ಗಟ್ಟಿಯಾಗಿಯೇ ಓದಬೇಕು, ಪ್ರತಿಮೆಗಳು ಇವೆಲ್ಲ ಸೇರಿ, ಕವನದಲ್ಲಿ ಸಂಗ್ರಹಿಸಿ ಗದ್ಯದಲ್ಲಿ ಹೇಳಬಹುದಾದ ಸಾರಾಂಶಕ್ಕಿಂತ ತೀರ ಭಿನ್ನವಾದ, ಅದನ್ನು ಮಿರಿದ ಅನುಭವವನ್ನು ಕಟ್ಟಿಕೊಡುತ್ತವೆ, ಮಹಾಕಾವ್ಯವು ದೀರ್ಘವಾಗಿದ್ದು ಕಥೆಯನ್ನು ಹೇಳುವುದರಿಂದ ಅದರಲ್ಲಿ ಕಾದಂಬರಿಯ ಕೆಲವು ಲಕ್ಷಣಗಳು ಪ್ರಕಟವಾಗಬಹುದು. ಆದರೆ ಕಥನ ಕವನವನ್ನು ವಿಶಿಷ್ಟವಾಗಿ ಪರಿಗಣಿಸಿ ಉಳಿದ ಕಾವ್ಯದ ಬಗೆಗೆ ಮಾತನಾಡುವುದಾದರೆ, ಕಾವ್ಯವು ಗದ್ಯಕ್ಕೆ ಎಟಿಕದ ಅನುಭವವನ್ನು ಸಮಗ್ರವಾಗಿ, ಅದರ ಸಂಕೀರ್ಣತೆಗೆ ಊನ ಬಾರದಂತೆ, ಕಟ್ಟಿಕೊಡುತ್ತದೆ. ಶಬ್ದಗಳು, ಅವುಗಳ ಜೋಡಣೆ, ನಾದ, ಲಯ, ಛಂದಸ್ಸು, ಪ್ರತಿಮೆಗಳು ಎಲ್ಲದರ ಮೂಲಕ ಅದು ಅನುಭವವನ್ನು ಪುನರ್‍ಸೃಷ್ಟಿ ಮಾಡುತ್ತದೆ.

       (ಪರಿಷ್ಕರಣೆ: ಎಲ್.ಎಸ್.ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ